ಕನ್ನಡದಲ್ಲಿ ಅಷ್ಟಕಗಳು : ಸಾಮಾನ್ಯವಾಗಿ ಎಂಟು ಪದ್ಯಗಳ ಒಂದು ಗುಚ್ಫವನ್ನು ಅಷ್ಟಕವೆಂದು ಕರೆಯುವುದು ವಾಡಿಕೆ. ಈ ಪದ್ಯಗಳು ವೃತ್ತ ಷಟ್ಪದಿಗಳಾಗಿರಬಹುದು ಅಥವಾ ಮತ್ತೆ ಯಾವುದೇ bsÀಂದೋರೂಪದಲ್ಲಿರಬಹುದು. ಎಲ್ಲ ಅಷ್ಟಕಗಳಲ್ಲಿಯೂ ಎಂಟು ಪದ್ಯಗಳೆ ಇರಬೇಕೆಂಬ ನಿಯಮ ನಿಯತವೇನೂ ಅಲ್ಲ. ಅನೇಕ ಅಷ್ಟಕಗಳಲ್ಲಿ ಈ ಸಂಖ್ಯೆ ಒಂಬತ್ತಾಗಬಹುದು, ಹತ್ತಾಗಬಹುದು, ಹನ್ನೊಂದಾಗಬಹುದು. ಅದು ಅನಿರ್ದಿಷ್ಟವಾಗಿ ಬೆಳೆದುಕೊಂಡು ಹೋಗಿರುವುದೂ ಉಂಟು. ಉದಾಹರಣೆಗೆ ಲಿಂಗಾಷ್ಟಕದಲ್ಲಿ ಎರಡೆರಡು ಪಂಕ್ತಿಯ ಪದ್ಯಗಳು ಐವತ್ತು ಇರುವುದು ಕಂಡುಬರುತ್ತದೆ. ಒಟ್ಟಾರೆ ನೋಡಿದಾಗ ಒಂಬತ್ತು ಪದ್ಯಗಳನ್ನೊಳಗೊಂಡಿರುವ ಅಷ್ಟಕಗಳೇ ಸಂಖ್ಯೆಯಲ್ಲಿ ಹೆಚ್ಚು ಕಂಡುಬರುತ್ತವೆ.
ಅಷ್ಟಕಗಳು ಇತರ ಪಂಚಕ, ಷಟ್ಕ, ದಶಕ, ಶತಕಗಳಂತೆ ಸ್ತೋತ್ರಸಾಹಿತ್ಯದ ಸಾಲಿನಲ್ಲಿ ಬರುತ್ತವೆ. ಇವುಗಳ ಪ್ರಧಾನ ವಿಷಯ ಭಕ್ತಿ ಮತ್ತು ವೈರಾಗ್ಯ, ಪ್ರತಿಯೊಂದು ಅಷ್ಟಕವೂ ಸಾಮಾನ್ಯವಾಗಿ ಇಷ್ಟದೈವವನ್ನು ಕುರಿತ ಸ್ತುತಿರೂಪವಾದ ಭಕ್ತಿಗೀತೆಯಾಗಿರುತ್ತವೆ. ಆ ಇಷ್ಟದೈವ ಜಿನನಾಗಬಹುದು. ಶಿವನಾಗಬಹುದು. ಹರಿಯಾಗಬಹುದು. ಅಥವಾ ಮತ್ತೆ ಯಾರಾದರೂ ಆಗಿರಬಹುದು. ಚಂದ್ರನಾಥಾಷ್ಟಕ, ಪಾಶರ್ವ್‌ನಾಥಾಷ್ಟಕ, ಹರ್ಯಷ್ಟಕ, ಲಿಂಗಾಷ್ಟಕ, ಶಂಕರಾಷ್ಟಕ, ವಿನಾಯಕಾಷ್ಟಕ, ಹೀಗೆ ವಿರಳವಾಗಿ ಅಷ್ಟಕಗಳಲ್ಲಿ ರಾಜನನ್ನು ಸ್ತುತಿಸಿರುವುದೂ ಉಂಟು. ದೇವರಾಜ ವಲ್ಲಭಾಷ್ಟಕ ಇದಕ್ಕೆ ನಿದರ್ಶನವಾಗಿದೆ. ವೈರಾಗ್ಯ, ತತ್ತ್ವಪ್ರತಿಪಾದನೆ ಮತ್ತು ಆತ್ಮನಿವೇದನೆಗಳೂ ಅಷ್ಟಕಗಳಲ್ಲಿ ವಿರಳವಾಗಿ ಕಂಡುಬರುತ್ತವೆ. ಪಂಚಪದಾಷ್ಟಕ ಮತ್ತು ತತ್ತ್ವಭೇದಾಷ್ಟಕಗಳು ವೈರಾಗ್ಯ ಮತ್ತು ತತ್ತ್ವಪ್ರತಿಪಾದನೆಯನ್ನು ಕುರಿತವಾಗಿವೆ. ಅಷ್ಟಕದ ಒಂದು ಸಾಮಾನ್ಯ ಲಕ್ಷಣವೆಂದರೆ ಅದರ ಪ್ರತಿಯೊಂದು ಪದ್ಯದ ಕೊನೆಯಲ್ಲೂ ಇಷ್ಟದೈವದ ಸಂಭೋದನೆಯಿರುತ್ತದೆ. ಚಂದ್ರನಾಥಾಷ್ಟಕದಲ್ಲಿ ಚಂದ್ರನಾಥಾ ಎಂಬ ಸಂಬೋಧನೆ ಪ್ರತಿಪದ್ಯದ ಕೊನೆಯಲ್ಲೂ ಬರುತ್ತದೆ. ಕೆಲವು ವೇಳೆ ಮೊದಲ ಪದ್ಯದ ಕೊನೆಯ ಸಾಲು ಪ್ರತಿಪದ್ಯದಲ್ಲಿಯೂ ಪುನರುಕ್ತವಾಗುತ್ತದೆ. ಷಡಕ್ಷರದೇವ ಸಂಸ್ಕೃತದಲ್ಲಿ ರಚಿಸಿರುವ ಸಿದ್ಧಲಿಂಗಾಷ್ಟಕದಲ್ಲಿ ಪ್ರತಿ ಪದ್ಯವೂ ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ಎಂಬುದರಿಂದ ಕೊನೆಯಾಗುತ್ತದೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ